Friday, October 19, 2012

DVG Nenapu-9 (20-10-2012) Video

DVG Nenapu-9 (20-10-2012) Photo Gallery

Sri R.S.Iyer is speaking.....








Sri Swamy Japanandaji, President, Sri Ramakrishna Sevashrama, Pavagada is addressing the gathering. Also seen (From Left) Sri R.Vishwanathan, Saras, Sri R.N.Satyanarayan, Former City Municipal Council President, Tumkur and Dr. T.S.Vijayakumar, Chairman, T.H.S. Super Speciality Hospital, Tumkur.

DVG Nenapu-9 (20-10-2012) NEWS

22-10-2012,        ಸೋಮವಾರ

ಆಧುನಿಕತೆ ಸೋಗಿನಲ್ಲಿ ಪರಂಪರೆಯ ನಿರ್ಲಕ್ಷ್ಯದಿಂದ 

ಬದುಕಿನಲ್ಲಿ ನೀಚತನ


ತುಮಕೂರಿನ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಟ್ಟಿದ್ದ “ಡಿವಿಜಿ ನೆನಪು-೯’’ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರು ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಸರಸ್ ವ್ಯವಸ್ಥಾಪಕ ಆರ್. ವಿಶ್ವನಾಥನ್, ಆರ್.ಎನ್.ಸತ್ಯನಾರಾಯಣ ಮತ್ತು ಡಾ|| ಟಿ.ಎಸ್. ವಿಜಯಕುಮಾರ್ ಅವರು ಇದ್ದಾರೆ.
           ತುಮಕೂರು : ಆಧುನಿಕತೆಯ ಸೋಗಿನಲ್ಲಿ ನಮ್ಮ ಶ್ರೇಷ್ಠ ಪರಂಪರೆಯನ್ನು ನಿರ್ಲಕ್ಷಿಸಿರುವುದರಿಂದಲೇ ಮನುಷ್ಯನ ನಡೆ-ನುಡಿಯಲ್ಲಿ ನೀಚತನ ತುಂಬಿಕೊಳ್ಳುತ್ತಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರು ಅಭಿಪ್ರಾಯಪಟ್ಟರು.
        ಅವರು ಅಕ್ಟೋಬರ್ 20 ರಂದು ತುಮಕೂರಿನ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಟ್ಟಿದ್ದ “ಡಿವಿಜಿ ನೆನಪು’’ ಶೀರ್ಷಿಕೆಯ ಒಂಭತ್ತನೆಯ ತಿಂಗಳಿನ ಉಪನ್ಯಾಸ ಕಾರ್ಯಕ್ರಮದಲ್ಲಿ “ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು” ಎಂಬ ವಿಷಯವಾಗಿ ಉಪನ್ಯಾಸ ಮಾಡುತ್ತಿದ್ದರು.
         ಭಾರತೀಯ ಪರಂಪರೆಯಲ್ಲಿ ವೇದ, ಉಪನಿಷತ್ತುಗಳೇ ಆಧಾರಸ್ಥಂಭಗಳು. ಮನುಷ್ಯನ ಬದುಕಿನ ರೀತಿ-ನೀತಿಗಳು ಹೇಗಿರಬೇಕೆಂಬುದನ್ನು ಅದರಲ್ಲಿ ಸ್ಪಷ್ಟಪಡಿಸಲಾಗಿದೆ. ಆ ವಿಚಾರಗಳು ಸಾರ್ವಕಾಲಿಕ ಸತ್ಯವೂ ಆಗಿವೆ. ಆದರೆ ಆಧುನಿಕತೆಯ ಸೋಗಿನಲ್ಲಿ ಪರಂಪರೆಯ ಮೌಲ್ಯಗಳನ್ನು ಕಡೆಗಣಿಸಿರುವುದರಿಂದ ಇಂದು ಬದುಕು ಶುಷ್ಕವಾಗುತ್ತಿದೆ. ಸ್ವಾರ್ಥಲಾಲಸೆ ಮಿತಿಮೀರಿ ಕೌಟುಂಬಿಕ ಸಂಬಂಧಗಳೂ ಛಿದ್ರಗೊಳ್ಳುತ್ತಿವೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯವೂ ಹದಗೆಟ್ಟು, ಅಧೋಗತಿಗಿಳಿಯುತ್ತಿದೆ ಎಂದು ಆತಂಕದಿಂದ ವಿವರಿಸಿದ ಅವರು, ತಂದೆ-ತಾಯಿಯನ್ನೇ ದೈವವೆಂದು ಭಾವಿಸಿ, ಭುಜದ ಮೇಲೆ ಹೊತ್ತು ನಡೆದ ಆ ಶ್ರವಣಕುಮಾರ ಎಲ್ಲಿ? ಆಸ್ತಿಗಾಗಿ ಹೆತ್ತವರನ್ನೇ ಕಾಡಿಸುವ ಈಗಿನ ಆಧುನಿಕ ಶ್ರವಣಕುಮಾರರು ಎಲ್ಲಿ? ಎಂದು ಮಾರ್ಮಿಕವಾಗಿ ಉದ್ಗರಿಸಿದರು.

         ಇದನ್ನೇ ‘ಆಧುನಿಕ ಋಷಿ’ ಡಾ|| ಡಿ.ವಿ.ಗುಂಡಪ್ಪ ಅವರು “ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು” ಎಂದು ‘ಮಂಕುತಿಮ್ಮನ ಕಗ್ಗ’ದ ಒಂದು ಪದ್ಯದಲ್ಲಿ ಅರ್ಥಗರ್ಭಿತವಾಗಿ ವಿಶ್ಲೇಷಿಸಿದ್ದಾರೆ. ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳೊಂದಿಗೆ ಆಧುನಿಕತೆ ಅರಳಬೇಕೆಂದು ಅವರು ಆಶಿಸಿದ್ದು, ಅದು ಅತ್ಯಂತ ವೈಜ್ಞಾನಿಕವೂ, ವೈಚಾರಿಕವೂ ಆಗಿದೆ. ಮನುಷ್ಯನ ಬಾಹ್ಯ ಆಡಂಬರದ ಬದುಕು ಮುಖ್ಯವಲ್ಲ; ಅಂತರಂಗದ ಜೀವನದಲ್ಲಿ ಉನ್ನತಿಯನ್ನು ಹೊಂದುವುದೇ ನಿಜವಾದ ಸಂಸ್ಕೃತಿ ಎಂದು ಡಿ.ವಿ.ಜಿ.ಯವರು ಒತ್ತಿ ಹೇಳಿದ್ದಾರೆ. ಅವರು ಕೇವಲ ಬರೆಯಲಿಲ್ಲ. ತಾವು ಬರೆದಂತೆಯೇ ಉನ್ನತ ಮಟ್ಟದ ಬದುಕು ನಡೆಸಿ, ಲೋಕಕ್ಕೊಂದು ಶ್ರೇಷ್ಠ ಮಾದರಿಯಾಗಿದ್ದಾರೆ ಎಂದು ಶ್ರೀ ಸ್ವಾಮಿ ಜಪಾನಂದಜಿಯವರು ಹೇಳಿದರು.
         ಮುಖ್ಯ ಅತಿಥಿಗಳಾಗಿದ್ದ ಟಿ.ಎಚ್.ಎಸ್. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರಾದ ಡಾ|| ಟಿ.ಎಸ್. ವಿಜಯಕುಮಾರ್ ಅವರು ಮಾತನಾಡಿ, ಯಾವುದನ್ನೂ ಪ್ರಶ್ನಿಸಲಾರದಷ್ಟು ಮನುಷ್ಯ ಇಂದು ದುರ್ಬಲನಾಗಿರುವ ಸನ್ನಿವೇಶದಲಿ, ದಾರ್ಶನಿಕ ಡಿವಿಜಿಯವರ ವಿಚಾರಧಾರೆಯು ಸಮಾಜಕ್ಕೆ ಶಕ್ತಿ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
        ಮತ್ತೋರ್ವ ಅತಿಥಿ ಮಾಜಿ ನಗರಸಭಾಧ್ಯಕ್ಷರಾದ ಆರ್.ಎನ್.ಸತ್ಯನಾರಾಯಣ್ ಅವರು ಮಾತನಾಡಿ, ಡಿವಿಜಿಯವರ ಚಿಂತನೆಯು ಪ್ರತಿಯೊಬ್ಬ ವ್ಯಕ್ತಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ನುಡಿದರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು.
           ಇದೇ ಸಂದರ್ಭದಲ್ಲಿ ತುಮಕೂರಿನ ವೈ.ಎ. ಜಯಪ್ರಕಾಶ್ ಅವರು ತಾವು ಭಗವದ್ಗೀತೆ, ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗದ ಆಯ್ದ ಶ್ಲೋಕಗಳು ಮತ್ತು ಪದ್ಯಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ಕೃತಿಯನ್ನು ಸ್ವಾಮೀಜಿಯವರಿಗೆ ಸಮರ್ಪಿಸಿ, ಮಾತನಾಡಿದರು. ಸಂಗೀತ ವಿದುಷಿ ರೂಪಾ ನಾಗೇಂದ್ರ ಪ್ರಾರ್ಥಿಸಿದರು. ಇಂಜಿನಿಯರ್ ವಿ.ವಿವೇಕ್ ಸ್ವಾಗತಿಸಿದರು. ಆರ್.ಎಸ್.ಅಯ್ಯರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಿ.ಶ್ರೀನಾಥ್ ವಂದಿಸಿದರು.
- ಆರ್. ವಿಶ್ವನಾಥನ್, ತುಮಕೂರು. (ವರದಿಗಾರರು, ವಿಕೆ ನ್ಯೂಸ್)