Wednesday, May 29, 2013

DVG Nenapu-16 ( 30-05-2013) News









`ಡಿವಿಜಿ ನೆನಪು-16’ ರಲ್ಲಿ ಸುರೇಶ್ ಕುಮಾರ್ ವಿಶ್ಲೇಷಣೆ – ಅಂತಃಕರಣ, ಅಂತಃಸತ್ವವೇ ಸಮಾಜದ ಜೀವಾಳ


ತುಮಕೂರಿನಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ವತಿಯಿಂದ ಏರ್ಪಟ್ಟಿದ್ದ `ಡಿವಿಜಿ ನೆನಪು’ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕರೂ ಹಾಗೂ ಮಾಜಿ ಸಚಿವರೂ ಆದ ಎಸ್. ಸುರೇಶ್‍ಕುಮಾರ್ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀ ಸ್ವಾಮಿ ಜಪಾನಂದಜಿ ಮತ್ತು ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ಇದ್ದಾರೆ.

          ತುಮಕೂರು : ಇದು ನಮ್ಮ ಸಮಾಜ, ಈ ಜನರು ನಮ್ಮವರು ಎಂಬ ಅಂತಃಕರಣ ಮತ್ತು ಅಂತಹ ಮನಃಸ್ಥಿತಿಯನ್ನು ಪ್ರೇರೇಪಿಸುವ ಅಂತಃಸತ್ವವೇ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಜೀವಾಳವಾಗಿದೆ ಎಂದು ಬೆಂಗಳೂರಿನ ರಾಜಾಜಿನಗರದ ಶಾಸಕರೂ ಹಾಗೂ ಮಾಜಿ ಸಚಿವರೂ ಆದ ಎಸ್. ಸುರೇಶ್‍ಕುಮಾರ್ ಅವರು ವಿಶ್ಲೇಷಿಸಿದರು.
          ಅವರು ಮೇ 30 ರಂದು ಸಂಜೆ ತುಮಕೂರಿನ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ವತಿಯಿಂದ ಏರ್ಪಟ್ಟಿದ್ದ `ಡಿವಿಜಿ ನೆನಪು’ ಮಾಲಿಕೆಯ 16 ನೇ ತಿಂಗಳಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

          ಅಂತರ್ಜಲವಿಲ್ಲದಿದ್ದರೆ ಬಾವಿಯಲ್ಲಿ ಹೇಗೆ ನೀರು ಲಭಿಸುವುದಿಲ್ಲವೋ ಅದೇ ಮಾದರಿಯಲ್ಲಿ ಅಂತಃಸತ್ವವಿಲ್ಲದಿದ್ದರೆ ವ್ಯಕ್ತಿ ಹಾಗೂ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುವುದಿಲ್ಲ ಎಂದ ಅವರು, ಈ ರೀತಿಯ ಅಂತಃಸತ್ವವನ್ನು ಮೂಡಿಸುವುದು ಹೇಗೆ ಎಂಬುದೇ ಪ್ರಸ್ತುತ ಸಾಮಾಜಿಕ ಕಳಕಳಿಯುಳ್ಳ ಪ್ರಜ್ಞಾವಂತರನ್ನು ಕಾಡುತ್ತಿದೆ ಎಂದು ಡಿವಿಜಿಯವರ ಬರಹಗಳನ್ನು ಉಲ್ಲೇಖಿಸುತ್ತ ಹೇಳಿದರು.
      ಇಂದು ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಎಂಬ ಕಾಲರಾ, ಸ್ವಜನ ಪಕ್ಷಪಾತ ಎಂಬ ಪ್ಲೇಗ್, ಅಸೂಯೆ ಎಂಬ ಮಲೇರಿಯಾ ಹಾಗೂ ಮತ್ತೊಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯುವಂತಹ ಏಡ್ಸ್ ರೋಗ ವ್ಯಾಪಿಸಿದೆ ಎಂದು ಮಾರ್ಮಿಕವಾಗಿ ಉದ್ಗರಿಸಿದ ಸುರೇಶ್‍ಕುಮಾರ್ ಅವರು, ಇಂತಹ ರೋಗಗಳು ಬಾರದಂತೆ ತಡೆಗಟ್ಟುವ ರೋಗ ನಿರೋಧಕ ಶಕ್ತಿ ಇಂದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಕಿಕ್ಕಿರಿದ ಸಭಿಕರ ಕರತಾಡನದ ನಡುವೆ ಸಾಂದರ್ಭಿಕ ಉದಾಹರಣೆಗಳೊಂದಿಗೆ ವಿವರಿಸಿದರು.
 ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ, ವೃತ್ತಿಪರತೆ, ದೂರದರ್ಶಿತ್ವ, ಅಂತಃಕರಣ ಹಾಗೂ ನೈತಿಕತೆ ಇವೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟ ಸುರೇಶ್‍ಕುಮಾರ್ ಅವರು, ಈ ವಿಚಾರಗಳ ಬಗ್ಗೆ ಡಿವಿಜಿಯವರ ವಿಚಾರಧಾರೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

   ಇಂದು ನಮಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ `ಮಾಡೆಲ್’ಗಳು ಬಹಳಷ್ಟು ಸಂಖ್ಯೆಯಲ್ಲಿ ಸಿಗಬಹುದು. ಆದರೆ ಸಮಾಜದಲ್ಲಿ ಅಂತಃಕರಣ ಹಾಗೂ ಅಂತಃಸತ್ವವನ್ನು ಬೆಳಗಿಸುವ `ರೋಲ್‍ಮಾಡೆಲ್’ಗಳು ಎಷ್ಟು ಜನರಿದ್ದಾರೆ ಎಂದು ಪ್ರಶ್ನಿಸುತ್ತ, ತಮ್ಮ ಮಾನವೀಯ ಸೇವಾಕಾರ್ಯಗಳಿಂದ ಇಡೀ ಸಮಾಜಕ್ಕೆ  `ರೋಲ್‍ಮಾಡೆಲ್’ ಆಗಿರುವ ಶ್ರೀ ಸ್ವಾಮಿ ಜಪಾನಂದಜಿ ಅವರಂತಹ ನೈತಿಕ ನಾಯಕರ ಅವಶ್ಯಕತೆ ನಮ್ಮ ಈಗಿನ ಸಮಾಜಕ್ಕಿದೆ ಎಂದು ಸಭಿಕರ ಹರ್ಷೋದ್ಗಾರದ ನಡುವೆ ಸುರೇಶ್‍ಕುಮಾರ್ ಅವರು ಅಭಿಪ್ರಾಯಪಟ್ಟರು.
        “ಡಿವಿಜಿ ದೃಷ್ಟಿಯಲ್ಲಿ ಸಾರ್ವಜನಿಕ ಜೀವನ” ವಿಷಯವಾಗಿ ಉಪನ್ಯಾಸ ನೀಡಿದ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅವರು ಜನಪ್ರತಿನಿಧಿಗಳ ನಡೆ-ನುಡಿ ಇಡೀ ಸಮಾಜದ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಜನಪ್ರತಿನಿಧಿಯಿಂದ ಸಭ್ಯತೆ ಮತ್ತು ಸತ್ಯನಿಷ್ಠೆಯಂತಹ ಮೂಲಭೂತ ಮಾನವೀಯತೆಯನ್ನು ಜನತೆ ಬಯಸುತ್ತಾರೆ. ಆದರೆ ಇಂದು ಯಾವ ಸ್ಥಿತಿ ಇದೆ ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು.

      ಸ್ನೇಹ, ಸೌಹಾರ್ದತೆ, ಪ್ರೀತಿ, ವಿಶ್ವಾಸ, ತಾಳ್ಮೆ, ಒಳ್ಳೆಯದನ್ನು ಪ್ರಶಂಸಿಸುವ ಉದಾರತೆ, ಸಾಮಾಜಿಕ ಕಳಕಳಿ, ದೇಶಪ್ರಜ್ಞೆ ಹೀಗೆ ಎಲ್ಲ ಸದ್ಗುಣಗಳನ್ನು ಕಳೆದುಕೊಳ್ಳುತ್ತಿರುವ ನಾವು ಎತ್ತ ಸಾಗುತ್ತಿದ್ದೇವೆ ಎಂದು ಕಳಕಳಿಯಿಂದ ಕೇಳಿದ ಅವರು, ಡಿವಿಜಿಯವರ ಜೀವನ ಹಾಗೂ ಬರಹಗಳು ಸಮಾಜದ ಎಲ್ಲ ವರ್ಗಗಳಿಗೂ ದಾರಿದೀಪವಾಗಿವೆ ಎಂದು ನುಡಿದರು.
         ರೂಪ ನಾಗೇಂದ್ರ ಮತ್ತು ತಂಡ ದೇಶಭಕ್ತಿ ಗೀತೆ ಹಾಡಿದರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಅಯ್ಯರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



















Praja Pragathi, 02-06-2013







ಆತ್ಮೀಯ ಬಂಧುಗಳೇ,

ಡಿವಿಜಿ ನೆನಪು-16 ನೇ ಉಪನ್ಯಾಸ ಕಾರ್ಯಕ್ರಮಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸಲು ನಮಗೆ ಅತೀವ ಹರ್ಷವುಂಟಾಗುತ್ತಿದೆ.



ತುಮಕೂರು ನಗರದಲ್ಲಿ ಪ್ರತಿ ತಿಂಗಳೂ ನಡೆಯುತ್ತಿರುವ ಅಪೂರ್ವ ಚಿಂತನಶೀಲ ಉಪನ್ಯಾಸ ಕಾರ್ಯಕ್ರಮ ಇದಾಗಿದ್ದು, ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಸಮಾಜದ ಎಲ್ಲ ವರ್ಗದ ವಿದ್ಯಾವಂತ ಸಮುದಾಯವನ್ನು ಈ ಕಾರ್ಯಕ್ರಮ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ದ ಜೊತೆಗೆ, ಡಿವಿಜಿ ವಿಚಾರಧಾರೆಯ ವಿವಿಧ ವಿಷಯಗಳ ಬಗ್ಗೆ ನಡೆಯುತ್ತಿರುವ ಈ ಉಪನ್ಯಾಸ ಮಾಲಿಕೆಯು ತುಮಕೂರಿನ ಸುಶಿಕ್ಷಿತ ಸ್ತ್ರೀ-ಪುರುಷರ ಮನಸೂರೆಗೊಳ್ಳುತ್ತಿದೆ.



ದಿನಾಂಕ 30-05-2013, ಗುರುವಾರ, ಸಂಜೆ 6-30 ಕ್ಕೆ ತುಮಕೂರಿನ ಸೋಮೇಶ್ವರಪುರಂನ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಯಶಸ್ವೀ 16 ನೇ ತಿಂಗಳಿನ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಈ ಜನಪ್ರಿಯ ಸರಣಿ ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಡುತ್ತಿರುವ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಪ್ರಧಾನ ಉಪನ್ಯಾಸ ಮಾಡಲಿದ್ದಾರೆ. ರಾಜ್ಯದ ಮಾಜಿ ಕಾನೂನು ಸಚಿವರೂ, ಹಾಲಿ ಬೆಂಗಳೂರಿನ ರಾಜಾಜಿನಗರದ ಶಾಸಕರಾದ ಸನ್ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.



ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದೆ. ದಯವಿಟ್ತು ತಾವು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿ.



ಆರ್.ವಿಶ್ವನಾಥನ್,



Dear Sir / Madam,



We are extremely delighted to invite you to 16th Discourse of "DVG Nenapu".



This monthly programme has gained huge popularity in Tumkur from past 15 months and has attracted learned intellectual group of people from every section of the society. The programme has fascinated both educated men and women to know about “Mankuthimmana Kagga” and different thoughts of Kannada Scholar Sri D V Gundappa.


We take pleasure in inviting you to 16th monthly programme of "DVG Nenapu" on Thursday the 30 May 2013 at 6.30 pm. Venue, Sri Gayathri Community Hall SS Puram Main Road Tumkur. This popular series of lecture is delivered by President of Sri Ramakrishna Sevashram, Pavagada His Holiness Dr.Sri Swami Japanandaji. Former Law Minister of Karnataka and present MLA of Rajaji Nagar, Bangalore Constituency Sri S.Suresh Kumar has consented to be the Chief Guest.

We are enclosing the invitation for this popular programme, we request you with your friends and relatives to grace this programme. We are sure your presence will make this programme a grand Successful one.

With respected regards, 

R.Vishwanathan


No comments:

Post a Comment