Monday, November 26, 2012

DVG NENAPU-10 (27-11-2012) NEWS

ಆಧುನಿಕತೆಗೆ ಆಧ್ಯಾತ್ಮಿಕದ ಸ್ಪರ್ಶ ಇರದಿದ್ದರೆ 

ಆತ್ಮವಂಚನೆಯ ಅಪಾಯ


ತುಮಕೂರು : ಮನುಷ್ಯನ ನಿತ್ಯ ಬದುಕಿನಲ್ಲಿ ಆಧ್ಯಾತ್ಮಿಕದ ಪ್ರಭೆ ಇದ್ದರೆ ಮಾತ್ರ ಆಧುನಿಕತೆಗೆ ಶೋಭೆ ಬರುತ್ತದೆ. ಬದುಕು ಮೌಲ್ಯಭರಿತಗೊಂಡು ಅರ್ಥಪೂರ್ಣವೆನಿಸುತ್ತದೆ. ಒಂದು ವೇಳೆ ಆಧುನಿಕತೆಗೆ ಆಧ್ಯಾತ್ಮಿಕದ ಸ್ಪರ್ಶ ಇಲ್ಲದೆ ಹೋದರೆ, ಮನುಷ್ಯ ತಾನೂ ಆತ್ಮವಂಚನೆ ಮಾಡಿಕೊಳ್ಳುತ್ತ, ಸಮಾಜವನ್ನೂ ವಂಚಿಸುವ ಅಪಾಯವಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಡಾ|| ಶ್ರೀ ಸ್ವಾಮಿ ಜಪಾನಂದಜಿ ಅವರು ನುಡಿದರು.
ಅವರು ನವೆಂಬರ್ 27 ರಂದು ತುಮಕೂರಿನ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ವತಿಯಿಂದ ಏರ್ಪಟ್ಟಿದ್ದ “ಡಿವಿಜಿ ನೆನಪು” ಮಾಲಿಕೆಯ ಹತ್ತನೇ ತಿಂಗಳಿನ ಕಾರ್ಯಕ್ರಮದಲ್ಲಿ ಕಿಕ್ಕಿರಿದ ಸಭಿಕರನ್ನುದ್ದೇಶಿಸಿ “ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು” ವಿಷಯವಾಗಿ ಉಪನ್ಯಾಸ ನೀಡುತ್ತಿದ್ದರು.
ಆಧ್ಯಾತ್ಮಿಕತೆಯು ಅರಳಿದರೆ ಬದುಕಿನಲ್ಲಿ ಸಹಜವಾಗಿಯೇ ಆತ್ಮಶಕ್ತಿ, ಆತ್ಮಶ್ರದ್ಧೆ, ಆತ್ಮವಿದ್ಯೆಯು ವಿಕಾಸಗೊಳ್ಳುತ್ತದೆ. ಬದುಕು ಮೌಲ್ಯಾಧಾರಿತವಾಗುತ್ತದೆ. ಆಗ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಮನುಷ್ಯ ಉನ್ನತ ಮಟ್ಟದಲ್ಲಿ ವ್ಯವಹರಿಸುತ್ತಾನೆ ಎಂದು ಅನೇಕ ಉದಾಹರಣೆಗಳೊಂದಿಗೆ ಅವರು ವಿವರಿಸಿದರು.
ನಮ್ಮ ಪ್ರಾಚೀನ ಪರಂಪರೆಯಲ್ಲಿ, ಆಚರಣೆಗಳಲ್ಲಿ ಜ್ಞಾನ ಹಾಗೂ ಮೌಲ್ಯಗಳು ಅಡಗಿವೆ. ಆದರೆ ಆಧುನಿಕತೆಯ ಅಹಂಕಾರ ಹಾಗೂ ಸೋಗಿನಲ್ಲಿ ನಾವು ಅವೆಲ್ಲವನ್ನೂ ನಿರ್ಲಕ್ಷಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳನ್ನು ಕುಟುಂಬ ಹಾಗೂ ಸಮಾಜದಲ್ಲಿ ಕಾಣುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೇ ದಾರ್ಶನಿಕ ಡಿ.ವಿ.ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. “ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು” ಎಂಬ ಸಾರ್ವತ್ರಿಕ ಸಂದೇಶ ನೀಡಿದ್ದಾರೆ. ಅಂತಹುದೊಂದು ಆಧ್ಯಾತ್ಮಿಕ ಬುನಾದಿಯನ್ನು ಅವರು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡು ಜಗತ್ತಿಗೇ ದಾರಿದೀಪವಾಗಿದ್ದಾರೆ. ಅದನ್ನು ಇಂದಿನ ಆಧುನಿಕ ಜನಸಮುದಾಯ ಅರ್ಥಮಾಡಿಕೊಂಡು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಸ್ವಾಮಿ ಜಪಾನಂದಜಿಯವರು ಕರೆ ನೀಡಿದರು.




ಜನತೆಯಿಂದ ಅಭಿನಂದನೆ
ಇತ್ತೀಚೆಗೆ ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದ ಹಾಗೂ ಕೇಂದ್ರ ಸರ್ಕಾರದ ಪ್ರತಿಷ್ಠಿತ “ರಾಜೀವ್ ಗಾಂಧಿ ಮಾನವ ಸೇವಾ ಪುರಸ್ಕಾರ” ಪ್ರಶಸ್ತಿ ಪಡೆದಿರುವ ಶ್ರೀ ಸ್ವಾಮಿ ಜಪಾನಂದಜಿಯವರಿಗೆ ಇದೇ ಸಂದರ್ಭದಲ್ಲಿ ತುಮಕೂರಿನ ಅನೇಕ ಗಣ್ಯರು ಹಾಗೂ ಅನೇಕ ಸಂಘ ಸಂಸ್ಥೆಗಳವರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಎಂ.ಎಸ್. ವೆಂಕಟಾಚಲ ಮತ್ತು ಹೆಸರಾಂತ ಕೈಬರಹ ವಿಶ್ಲೇಷಕರಾದ ಎಂ. ಕುಮಾರ ಸ್ವಾಮಿ ಅವರು ಡಿವಿಜಿಯವರ ವಿಚಾರಧಾರೆಯ ಪ್ರಸ್ತುತತೆಯನ್ನು ಸ್ಮರಿಸಿದರು. ಸರಸ್ ವ್ಯವಸ್ಥಾಪಕ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು.
ಯುವ ಗಾಯಕಿ ಮನ್ವಿತ ಪ್ರಾರ್ಥಿಸಿದರು. ಯುವ ಇಂಜಿನಿಯರ್ ವಿ.ವಿವೇಕ್ ಸ್ವಾಗತಿಸಿದರು. ಆರ್.ಎಸ್.ಅಯ್ಯರ್ ಕಾರ್ಯಕ್ರಮ ನಿರೂಪಿಸಿದರು. ವಕೀಲ ಚಂದ್ರಚೂಡ ವಂದಿಸಿದರು.
- ಆರ್. ವಿಶ್ವನಾಥನ್, ತುಮಕೂರು. (ವರದಿಗಾರರು, ವಿಕೆ ನ್ಯೂಸ್) 







No comments:

Post a Comment